ಮತ್ತೆ ಏನು…?
ಯಾರು ನಾನು… ?
ಮರೆತುಬಿಟ್ಟಿದ್ದೇನೆ!
ಜನಕನ ಪುತ್ರಿ
ಉತ್ತಮನ ಸತಿ
ಉದಾಸ ಊರ್ಮಿಳೆ
ಮರೆತು ಹೋದ
ಸಖನ ಶಕುಂತಲೆ!
ಯಾರ ಆಯುಷ್ಯ ಹೊತ್ತ ಬೈತಲೆ?
ಮತ್ತೆ ಏನು…?
ಪಗಡೆಯಾಟದ ಒತ್ತೆ
ಪುರುಷಪುರದ ಸ್ವತ್ತೇ?
ಕುರುಡು ರಾಜನ ಕತ್ತಲ ಪಟ್ಟಿ…
ಶಾಪಗ್ರಸ್ತ ಶಿಲೆಯ ರೋಧನ ಗಟ್ಟಿ
ಮತ್ತೆ ಏನು…?
ಮಾನದ ಹೊಸಿಲು,
ಜೀವದ ತೊಟ್ಟಿಲು
ಕತ್ತಲೆಗೆ ಕಂದೀಲು,
ಬಿಸಿಲಿಗೆ ನೆರಳು
ಮತ್ತೆ ಏನು…?
ಯಾವ ಚೀತ್ಕಾರದ ಬಯಲು…
ಯಾವ ವ್ಯಾಮೋಹದ ತೊಗಲು
ಯಾವ ಕುಲದಿಂದ ಹೊರಗೆ
ಯಾವ ಕುಲದ ಚಿನ್ಹೆ
ಮತ್ತೆ ಏನು…?
ಮೊಲೆ, ಮುಡಿ, ಯೋನಿ
ಉಂಗುರ, ಕುಂಕುಮ, ತಾಳಿ
ಯಾವುದರಲ್ಲಿ ಬಂಧಿ ?
ಯಾಕೆ ನಾನು ಬೆವರು…
ಯಾವಾಗಲೂ ನೆತ್ತರು!
ಮತ್ತೆ ಏನು…?
ಕಾಮದ ಕಸ್ತೂರಿ
ದಹ ದಹಿಸೋ ದಳ್ಳುರಿ!
ಯಾಕೆ ನಾನು ಮಾಯೆ
ಯಾಕೆ ಯಾರ ಛಾಯೆ
ಮತ್ತೆ ಏನು…?
ಯಾವ ಗಜಲು, ಯಾರ ಅಮಲು
ಯಾಕೆ ಕಟ್ಟಳೆಗಳಿಗೆ ಮೀಸಲು?
ಯಾವ ಮಾತು ಯಾವ ಕೊರಳು
ಯಾವ ಮೌನ, ಯಾರ ಸರಕು
ಮತ್ತೆ ಏನು…?
ಯಾವ ಅಂಗಳದ ಬಂಧಿ ನಾನು
ಯಾವ ಕನಸುಗಳ ಚಿಂದಿ ನಾನು
ಯಾವ ಶಾಸ್ತ್ರ, ಯಾವ ಪಾತ್ರ
ಯಾವ ತೊರೆ, ಸೇರಬೇಕ್ಯಾವ ಕಡಲು
ಮತ್ತೆ ಏನು…?
ಹಕ್ಕಿಯಾಗಬೇಕು ನಾನು…
ರೆಕ್ಕೆ ಮತ್ತು ಆಕಾಶ
ಹೊರತು ಬೇರೆಲ್ಲ
ಮರೆತುಹೋಗಬೇಕು
ಮತ್ತೆ ಏನೂ…
© 2021 AJ
Writing & Art
8th March 2021